ಕಾಳಿಂಗರಾವ್, ಪಿ

 (1911-81) ಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ. 1914 ಆಗಸ್ಟ್ 31 ರಂದು ದಕ್ಷಿಣ ಕನ್ನಡ ಜಿಲ್ಲೆ ಪಾಂಡೇಶ್ವರದಲ್ಲಿ ಜನಿಸಿದರು. ಹಾರಾಡಿ ರಾಮಗಾಣಿಗರ ಗುರುಗಳಾಗಿದ್ದ ಪಾಂಡೇಶ್ವರ ಪುಟ್ಟಯ್ಯ ಇವರ ತಂದೆ, ತಾಯಿ ನಾಗರತ್ನಮ್ಮ. ಸುಬ್ರಹ್ಮಣ್ಯ ದೇವರ ಮನೆಯೊಕ್ಕಲಿನವರಾಗಿದ್ದ ತಾಯಿ, ಮಗನಿಗೆ ಸುಬ್ರಹ್ಮಣ್ಯ ಹೆಸರನ್ನೇ ಇಟ್ಟು ಸುಬ್ರಾಯ ಶಾನಭಾಗ್ ಎಂದು ಕರೆಯುತ್ತಿದ್ದರು. ಅನಂತರ ಕಾಳಿಂಗಶರ್ಮನೆನಿಸಿ, ಮುಂದೆ ಕಾಳಿಂಗರಾವ್ ಎಂಬ ಹೆಸರು ರೂಢಿಗತವಾಯಿತು.

 ಬಾಲ್ಯದಲ್ಲಿ ಶಾಲಾರಂಗಭೂಮಿಯಿಂದಲೇ ನಾಟಕರಂಗ, ಪ್ರವೇಶಿಸಿದರು. ಇವರಲ್ಲಿದ್ದ ಸುಪ್ತಕಲೆಯ ವಿಕಾಸಕ್ಕೆ ನೆರವಾದವರು ಸೋದರಮಾವ ಸೂರತ್ ಮಂಜಯ್ಯ. ಬಾಲಕನಲ್ಲಿದ್ದ ಸಂಗೀತಾಸಕ್ತಿಯನ್ನು ಗುರುತಿಸಿದ ಅವರು ಶ್ಲೋಕಗಳು, ದೇವರ ನಾಮಗಳು, ಭಜನೆಗಳನ್ನು ಕಲಿಸಿದರು. ಕಾಲಕ್ರಮದಲ್ಲಿ ರಾಯರ ಒಲವು ಶಾಸ್ತ್ರೀಯ ಸಂಗೀತದತ್ತ ಹೊರಳಿತು. ಜೊತೆ ಜೊತೆಗೇ ಅಂಟಿ ಕೊಂಡಿದ್ದು ಸಂಗೀತ ಹಾಗೂ ನಾಟಕದ ಗೀಳು. ಇದರೊಂದಿಗೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳೆರಡರ ಸಾಹಿತ್ಯದಲ್ಲೂ ಆಸಕ್ತಿ ತಳೆದರು. ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಂದ್ರಹಾಸ ನಾಟಕದಲ್ಲಿ ಚಂದ್ರಹಾಸನಾಗಿ ಅಭಿನಯಿಸಿ ತಮ್ಮ ಅಭಿನಯಕ್ಕೆ ಚಿನ್ನದ ಪದಕ ಪಡೆದುಕೊಂಡರು. ಆಗ ನಾಟಕ ವೀಕ್ಷಿಸಿದ ರಂಗಭೂಮಿಯ ನಟ ಮುಂಡಾಜೆ ರಂಗನಾಥಭಟ್ಟರು ತಮ್ಮ ಅಂಬಾಪ್ರಸಾದಿತ ನಾಟಕ ಮಂಡಳಿಯಲ್ಲಿ ಅವಕಾಶ ಕಲ್ಪಿಸಿದರು. ಲೋಹಿತಾಶ್ವ, ಧ್ರುವ, ಕೃಷ್ಣನಾಗಿ ಬಾಲ ಪಾತ್ರಗಳಲ್ಲಿ ಮೆರೆದರು. ಭಟ್ಟರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಶಿಕ್ಷಣವನ್ನು ಪಡೆಯುವ ಅವಕಾಶ ಕಾಳಿಂಗರಾಯರಿಗೆ ದೊರೆಯಿತು. ಆ ನಾಟಕ ಕಂಪನಿಯಲ್ಲಿ ಮುಖ್ಯ ಪಾತ್ರಧಾರಿಗಳಾಗಿದ್ದ ವೆಂಕಟರಾವ್ ರಾಮದುರ್ಗಾ ಹಾಗೂ ರಾಮಚಂದ್ರಬುವಾ ಮರೇಳಕರ್ ಇವರಿಗೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನೂ ಕಲಿಸಿದರು. ಕಾಲಕ್ರಮದಲ್ಲಿ ಇವರು ಬಾಲ ಪಾತ್ರಗಳಿಂದ ಸ್ತ್ರೀ ಪಾತ್ರಕ್ಕೇರಿದರು. ರಾಯರ ಸೊಸೆ, ಆಜನ್ಮಕುಮಾರಿ, ಕಾಳಿಯ ಮರ್ದನ, ತುಳಸಿದಾಸ, ಮಿಸ್ ಮಾಧುರಿ, ವಿಕ್ರಮ ಶಶಿಕಲಾ ಮುಂತಾದ ನಾಟಕಗಳಲ್ಲಿ ಸ್ತ್ರೀ ಪಾತ್ರಧಾರಿಯಾಗಿ ಅಬಿsನಯಿಸಿದರು.

 ಹಲವಾರು ಕಂಪನಿ ನಾಟಕಗಳಲ್ಲಿ ವೇಷ ಹಾಕಿ ಮೆರೆದಿದ್ದ ರಾಯರು ಚಲನಚಿತ್ರರಂಗದ ಲೋಕಕ್ಕೆ ಬೆರಗಾಗಿ ಮದರಾಸಿಗೆ ಕಾಲಿಟ್ಟರು. ಪ್ರೇಮಸಾಗರ, ವಸಂತಸೇನಾ ಮೊದಲಾದ ಚಿತ್ರಗಳಿಗೆ ಸಂಗೀತ ನೀಡಿದರು. ಇದರೊಂದಿಗೆ ಚಿತ್ರಗಳಲ್ಲೂ ಅಭಿನಯಿಸಿದರು. ಇವರ ಪ್ರತಿಭೆಯನ್ನು ಗುರುತಿಸಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯವರು, ತಮ್ಮ ಸಂಗೀತ ಕಾಲೇಜಿಗೆ ಪ್ರಾಚಾರ್ಯರನ್ನಾಗಿ ನೇಮಿಸಿಕೊಂಡರು. ಆದರೆ ಕೆಲಸದ ಏಕತಾನತೆಗೆ ಬೇಸರಗೊಂಡು, ಕೆಲಸಕ್ಕೆ ರಾಜೀನಾಮೆ ನೀಡಿದರು.

 ಮದರಾಸು ಬಿಟ್ಟು ಮೈಸೂರಿಗೆ ಬಂದರು. ಇಲ್ಲಿ ನಿರ್ಮಾಣವಾದ ಪ್ರಥಮ ಚಲನಚಿತ್ರ ಕೃಷ್ಣಲೀಲಾಗೆ ಸಂಗೀತ ನೀಡಿದರು. ಯಾರೂ ತುಳಿಯದ ಜಾಡಿನಲ್ಲಿ ತಮ್ಮ ಹೆಜ್ಜೆಯನ್ನೂರುವ ಆಸೆ ಇವರದಾಗಿತ್ತು. ಆ ತುಡಿತದ ಫಲವೇ ಜನಪದ ಗೀತೆಗಳು, ಲಾವಣಿ, ವಚನ, ದೇವರನಾಮ, ಭಾವಗೀತೆ ಮುಂತಾದ ವೈವಿಧ್ಯಮಯವಾದ ಸಾಹಿತ್ಯದ ಹಾಡುಗಾರಿಕೆಯಲ್ಲಿ ಸಾರ್ಥಕತೆಯನ್ನು ಪಡೆದರು. ಕರ್ಣಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತದ ಜೊತೆಗೆ ಪಾಶ್ಚಾತ್ಯ ಸಂಗೀತವನ್ನೂ ಅಭ್ಯಾಸ ಮಾಡಿದ್ದರಿಂದ ಆಯಾಯಾ ಸಾಹಿತ್ಯದ ಧ್ವನಿಯನ್ನನುಸರಿಸಿ ರಾಗದ ಕವಚವನ್ನು ತೊಡಿಸಿ, ಕವನದ ಭಾವಕ್ಕೆ ಇಂಬುಕೊಡುತ್ತಿದ್ದರು.

 ಹುಯಿಲಗೋಳ ನಾರಾಯಣರಾಯರ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ಗೀತೆಯನ್ನು ಸ್ವರಸಂಯೋಜಿಸಿ ಹಾಡಿದರು (1946). ಕರ್ನಾಟಕ ರಾಜ್ಯೋದಯದ ಅನಂತರ ಕರ್ನಾಟಕ ಸರ್ಕಾರ ಈ ಹಾಡನ್ನು ಹಾಡಿದ್ದ ಕಾಳಿಂಗರಾಯರನ್ನು ಸನ್ಮಾನಿಸಿತು. ಇವರು ತಮ್ಮ ವಿಶಿಷ್ಟ ಗಾಯನದ ಮೂಲಕ ಜನಪದಗೀತೆಗಳಿಗೆ, ಭಾವಗೀತೆಗಳಿಗೆ ಹೊಸ ತಿರುವನ್ನು ಕೊಟ್ಟರು. ಜಿ.ಪಿ. ರಾಜರತ್ನಂರವರ ರತ್ನನ ಪದಗಳನ್ನು ಹೇಗೆ ಭಾವಪೂರ್ಣವಾಗಿ ಹಾಡಬಹುದೆಂದು ಮೊದಲಿಗೆ ತೋರಿಸಿಕೊಟ್ಟರು. ಇವರ ನಾಲಿಗೆಯ ಮೇಲೆ ದಾಸರು ನಲಿದರು, ವಚನಕಾರರು ಕುಣಿದರು, ಜನಪದರು ಉಕ್ಕಿ ಹರಿದರು, ಭಾವಗೀತಾಕಾರರು ಮಿಂಚಿದರು, ಯೆಂಡ್ಕುಡಕರತ್ನ ಮೆರೆದ. ಕಾಳಿಂಗರಾಯರು ಎಲ್ಲ ಪ್ರಕಾರದ ಹಾಡುಗಳಿಂದ ಭಾರತದ ಉದ್ದಗಲಕ್ಕೂ ತಮ್ಮ ಗಾನಸುಧೆ ಹರಿಸಿದರು. ಇದಲ್ಲದೆ ಕಿತ್ತೂರು ಚೆನ್ನಮ್ಮ, ಅಬ್ಬಾ ಆ ಹುಡುಗಿ, ಅಣ್ಣ ತಂಗಿ, ಲಗ್ನಪತ್ರಿಕೆ ಚಿತ್ರಗಳಲ್ಲಿ ಹಾಡಿದರು. ನಟಶೇಖರ, ಅಬ್ಬಾ ಆ ಹುಡುಗಿ, ತರಂಗ ಚಿತ್ರಗಳಿಗೆ ಸಂಗೀತ ನೀಡಿದರು.

 ನಾಟಕರತ್ನ ಗುಬ್ಬಿವೀರಣ್ಣನವರ ದಶಾವತಾರ ನಾಟಕಕ್ಕೆ ಸಂಗೀತ ನಿರ್ದೇಶಿಸಿದರು (1955). ಆ ಕಂಪನಿಯ ಲವಕುಶ ನಾಟಕಕ್ಕೂ ಸಂಗೀತ ನೀಡಿದರು. ಸುಮಾರು ಐದಾರು ವರ್ಷ ಈ ಕಂಪನಿಯಲ್ಲಿ ದುಡಿದರು. ರಂಗನಾಟಕಗಳಿಗೂ ವಿನೂತನ ಶೈಲಿಯ ಹೊಚ್ಚ ಹೊಸ ರಾಗರೂಪವನ್ನು ಕೊಟ್ಟು ಪ್ರಸಿದ್ಧರಾದರು.

 ಆಕಾಶವಾಣಿಯ ಗಾಯಕರಾಗಿಯೂ ಇವರು ಸೇವೆಸಲ್ಲಿಸಿದರು. ಇಂಥ ಪ್ರತಿಭಾವಂತ ಗಾಯಕನಿಗೆ ಜಾನಪದ ಸಂಗೀತರತ್ನ, ಬಾಲಗಂಧರ್ವ, ಜಾನಪದ ಕಲಾಚಕ್ರವರ್ತಿ, ಗಾಯನ ಚಕ್ರವರ್ತಿ, ಗಾಯನ ಕಂಠೀರವ, ಕನ್ನಡ ಉದಯಗಾನ ಕೋಗಿಲೆ, ಸಂಗೀತ ರಸವಿಹಾರಿ  ಇವು ಜನ ಮೆಚ್ಚಿಕೊಟ್ಟ ಬಿರುದುಗಳು. ಇವರ ಬಾಳಿನ ಸಂಜೆ ಅಷ್ಟೊಂದು ಸುಗಮವಾಗಿರಲಿಲ್ಲ. ಆರ್ಥಿಕ ಮುಗ್ಗಟ್ಟಿನಿಂದಾಗಿ ನಲುಗಿದರು. ಇವರ ಪತ್ನಿ ಮೀನಾಕ್ಷಿ. ಕಾಳಿಂಗರಾಯರು 1981 ಸೆಷ್ಟೆಂಬರ್ 21ರಂದು ನಿಧನರಾದರು. ಎಚ್.ಎಂ.ವಿ.ಸಂಸ್ಥೆ ಇವರ ಕೆಲವು ಧ್ವನಿಮುದ್ರಿಕೆಗಳನ್ನು ಹೊರತಂದಿದೆ.         (ಎಚ್.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ